ಕೆಲ ದಿನಗಳ ಹಿಂದೆ, ಚೆನ್ನೈಯಲ್ಲಿ ಕಂಡ ದೃಶ್ಯ -
ಓರ್ವ ಭಿಕ್ಷುಕ, ಎಣ್ಣೆ ಕಾಣದ ಕೂದಲು, ಮಣ್ಣಿಗೂ ಅವನ ಮೈಗೂ ವ್ಯತ್ಯಾಸವೇ ಇಲ್ಲವೇನೋ ಎಂಬಷ್ಟು ಕೊಳಕಾದ ಅವನ ಮೈ-ಬಟ್ಟೆ, ಹುಲುಸಾಗಿ ಬೆಳೆದ ದಾಡಿ - ರಸ್ತೆ ಬದಿಯಲ್ಲಿ ಕುಳಿತಿದ್ದ. ಅವನ ಎದಿರು ಓರ್ವ ಸಾಮಾನ್ಯ ನಾಗರೀಕ; ಭಿಕ್ಷುಕನ ದನಿಗೆ ಪ್ರತಿಯಾಗಿ, ತಾನು ತಂದ ಆಹಾರವನ್ನ ಶುಚಿಯಾದ ತಟ್ಟೆಯಲ್ಲಿ ಹಾಕಿ, ತನ್ನ ಕೈಯಿಂದಲೇ ಆ ಭಿಕ್ಷುಕನಿಗೆ ಉಣ್ಣಿಸುತ್ತಿದ್ದಾನೆ!
ಓದಿದ್ದೆ ಇಂತಹ ದೈವೀ ವ್ಯಕ್ತಿಗಳ ಬಗ್ಗೆ, ಕಣ್ಣಾರೆ ಕಂಡದ್ದು ಇದೇ ಮೊದಲು.
ಜಗತ್ತಿನ ಅನ್ಯಾಯ, ಮೋಸಕ್ಕೆ ಎಷ್ಟೋ ಬಾರಿ ಮನಸ್ಸಿನಲ್ಲಿ ಅಸಹಾಯಕತೆ ಮೂಡುವುದಿದೆ, ಜನಗಳಲ್ಲಿ ಸತ್ಯ, ನ್ಯಾಯ-ನೀತಿ, ಎಲ್ಲಕ್ಕೂ ಮೊದಲಾಗಿ ಮಾನವೀಯತೆ ಸತ್ತೇ ಹೋಗಿದೆಯೇನೋ ಅನ್ನುವ ಭೀತಿ ಕಾಡುವುದಿದೆ....ನಾ ಕಂಡ ಆ ದೃಶ್ಯ ಮನಸ್ಸಿನಲ್ಲಿ ಆಶಾ ಕಿರಣವನ್ನ ಮೂಡಿಸಿತು; ಹಾಗೇ, ನನ್ನೊಳಗೆ - ನಾನೇನು ಮಾಡಿದ್ದೇನೆ, ನನ್ನ ಕೊಡುಗೆ ಸಮಾಜಕ್ಕೆ ಎಷ್ಟು -ಹೀಗೆ ಮಂಥನಕ್ಕೆ ಎಡೆ ಮಾಡಿ ಕೊಟ್ಟಿತು.