Thursday, December 24, 2009

ಹೊಸ ವರುಷ :)

ಭೌತಿಕವಾಗಿ ಎಲ್ಲ ದಿನಗಳೂ ಬಹುತೇಕ ಒಂದೇ ಆಗಿರುತ್ತವೆ. ಆಯಾ ದಿನದ ಮಹತ್ವ, ಭಾವನಾತ್ಮಕವಾಗಿ ನಿರ್ಧರಿಸಲ್ಪಡುತ್ತದೆ. ಮಾನವನ ಮನಸ್ಸಿಗೆ ಇರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ.'ಹುಟ್ಟಿದ ದಿನ', ಸ್ವಾತಂತ್ರದ ದಿನ', ಹುತಾತ್ಮರ ದಿನ', ...ಹೀಗೆ. ನಾವೇ ನಿರ್ಮಿಸಿದಂತಹ ಈ ದಿನಗಳಿಗೆ ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಹೊಂದಿಕೊಂಡಿದೆ ಅಂತ ಯೋಚಿಸಿದರೆ ಬಹಳ ಅಚ್ಚರಿ ಎನಿಸುತ್ತದೆ.
'ಹೊಸ ವರುಷ'- ಹತ್ತಿರ ಬರುತ್ತಾ ಇದೆ, ಹೊಸ ಕನಸುಗಳು, ಯೋಜನೆಗಳು, ಉತ್ಸಾಹ,...ಎಲ್ಲರಲ್ಲಿ...ದಶಂಬರದಲ್ಲೂ ಮಾಡಬಹುದಾದ ಕಾರ್ಯಗಳನ್ನ ಜನವರಿ ಒಂದಕ್ಕೆ ಮಾಡುವುದರಲ್ಲಿ ಏನೋ ಖುಷಿ! ಕೆಲವೊಮ್ಮೆ ಅನಿಸುತ್ತದೆ-ಇದು ಒಂದು ರೀತಿಯ ಪಲಾಯನ ವಾದ ಅಂತ, ಮತ್ತೆ ಯೋಚಿಸುತ್ತೇನೆ-'ಅಯ್ಯೋ ಗೀತ ಅಷ್ಟು ಯೋಚಿಸಬೇಡ ಅಂತ'....
"ಏನೇ ಆಗಲಿ, ಹೊಸ ವರುಷ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ, ಎಲ್ಲೆಲ್ಲಿಯೂ ಶಾಂತಿ-ನೆಮ್ಮದಿ ಇರಲಿ " 

Sunday, December 13, 2009

ನಿವೇದನೆ

ಸಾಕುಪ್ರಾಣಿ-ಪಕ್ಷಿಗಳ ಅಳಲು ಹೀಗಿರಬಹುದೋ ಏನೋ ಅಂತ ಅನಿಸಿದಾಗ ಬರೆದದ್ದು -

"ಬಂಧಿಸಿಡದಿರಿ ನನ್ನ
ಭಾವಚಿತ್ರದ ಚೌಕಟ್ಟಿನೊಳಗೆ

ಸುಂದರವಾದ ಕಲಾಕೃತಿ ಆಗಬೇಕೆಂಬ
ಹಂಬಲ ನನಗಿಲ್ಲ
ಜನಮನ ಸೂರೆಗೊಳ್ಳುವ ಅಂದ
ಬೇಕೆಂಬ ಆಸೆ ನನಗಿಲ್ಲ

ಮತ್ತೇನು ಬೇಡ ನನಗೆ
ಕೊಡುವಿರಾದರೆ ಬಿಟ್ಟುಕೊಡಿ
ಸ್ವಚ್ಚಂದ ಆಗಸದಡಿ ಮನಸೋ ಇಚ್ಚೆ
ಪ್ರಕೃತಿಯ ಅನುಭಸುವ ಅನುಭೂತಿಯ"

Friday, November 27, 2009

ಧರ್ಮದ ಸರಳ ವ್ಯಾಖ್ಯಾನ :)

ನಗುವು ಸಹಜದ ಧರ್ಮ; ನಗಿಸುವುದು ಪರ ಧರ್ಮ|
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವು ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ||
-ಡಿವಿಜಿ

Monday, November 16, 2009

ತಾಯೇ ಇಳಿದು ಬಾ..

ಇತ್ತೀಚಿಗೆ ನನ್ನನ್ನು ಬಾಧಿಸುತ್ತಿರುವ ಸಂಗತಿ - ಪ್ರಕ್ಷುಬ್ಧ ಸಾಮಾಜಿಕ ಸಂಬಂಧಗಳು.
ಮನುಷ್ಯ ಮನುಷ್ಯರ ನಡುವೆ ಬತ್ತಿಹೋಗುತ್ತಿರುವ ವಿಶ್ವಾಸ, ಎಲ್ಲೆಲ್ಲೂ ಕಡಿಮೆಯಾಗುತ್ತಿರುವ 'ನಂಬಿಕೆ', ಹೆಚ್ಚು-ಕಡಿಮೆ ಎಂದು ಅಳೆಯುವ ಪೈಪೋಟಿ, ಅವನನ್ನು ಕೆಳಗೆಳೆದರೆ ಮಾತ್ರ ನಾನು ಮೇಲೇರಬಹುದೆಂಬ ಲಫಂಗತನ,.. ಮೋಸ, ದ್ವೇಷ, ಅಪನಂಬಿಕೆ.. ಇವೆಲ್ಲವನ್ನೂ ಮೀರಿ 'ಏನಾದರೆ ನನಗೇನು' ಎಂಬ indifference. ಒಬ್ಬರಿಗೊಬ್ಬರು ಸಹಕರಿಸಿ, ಪ್ರೀತಿಯಿಂದ, ಸಹನೆಯಿಂದ, ಹಿಂಸೆಮಾಡದೆ ಬದುಕುವಂತೆ ಆಗುವ ನಿಟ್ಟಿನಲ್ಲಿ ನಾನು ಏನೇ ಮಾಡಲು ಸಾಧ್ಯವಿದ್ದರೂ ಮಾಡಬೇಕೆನಿಸುತ್ತೆ... ಏನು ಮಾಡಲಿ?

Monday, November 9, 2009

ಹೀಗೆ...

ಇವತ್ತು ತಲೆ ಬಾಚುವಾಗ ಮನಸ್ಸಿಗೆ ಹೊಳೆದದ್ದು :) - 'ಕೂದಲು ಗಂಟು ಗಂಟಾಗಿತ್ತು, ಯಾವತ್ತು ಉಪಯೋಗಿಸುವ ಬಾಚಣಿಗೆ ಸರಿಯಾಗಲಿಲ್ಲ,ಹಣಿಗೆಯ ಹಲ್ಲುಗಳ ಮಧ್ಯೆ ಹೆಚ್ಚಿನ ಜಾಗ ಇರಬೇಕು, ಆಗ ಗಂಟು ನೋವಾಗದಂತೆ ಬಿಡಿಸಬಹುದು ಅಂತ ಹಣಿಗೆ ಬದಲಾಯಿಸಿದೆ'- ಜೀವನದಲ್ಲೂ ಅಷ್ಟೆ, ಸಮಸ್ಯೆಗಳ ಅಳಕ್ಕೆ ತಕ್ಕಂತೆ, ಪರಿಹಾರ ವಿಧಾನವೂ ಬದಲಾಗುತ್ತದೆ,....ಆದರೆ ಯಾವ ರೀತಿಯ ಪರಿಹಾರ ಬೇಕು ಅನ್ನುವುದರ ಸ್ಪಷ್ಟತೆಯೂ ಅಗತ್ಯ....ಸಿಕ್ಕಾದ ಕೂದಲನ್ನು ಕತ್ತರಿಸಿದರೂ ಸಿಕ್ಕು ಬಿಡುತ್ತದೆ, ಗಂಟಿಲ್ಲದೆ, ಹಾಗೆಯೇ ಪಲಾಯನ ಮಾಡದೇ ಸಮಸ್ಯಗಳ ಸುಳಿಯಿಂದ ಹೊರ ಬರಲಿಕ್ಕೆ ಅದಕ್ಕೆ ತಕ್ಕುದಾದ ಪರಿಹಾರ ಹುಡುಕುತ್ತಾ ಮುಂದೆ ಸಾಗುವುದೇ ಸುಖೀ ಜೀವನದ ರಹಸ್ಯ :)

Thursday, October 29, 2009

"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ "
-ಡಿ.ವಿ.ಜಿ

ಹೊಂದಾಣಿಕೆ ಮತ್ತು ಲೀನವಾಗುವುದು ಅನ್ನೋದನ್ನ ಕವಿ ಒಂದೇ ಪ್ರಕ್ರಿಯೆ ಅಂತ ಬರೀತಾರೆ. ಇಲ್ಲಿ ಜೀವನದ ಸಿಹಿ ಕಹಿಗೆ ಹೇಗೆ ಸ್ಪಂದಿಸಬೇಕು ಅನ್ನೋದನ್ನ ಹೇಳ್ತಾ ಇರುವ ಹಾಗೆಯೇ 'ತಾನು' ಅನ್ನುವ ಚೌಕಟ್ಟಿನ ಹೊರಗೆ ಬರುವ ಪ್ರಕ್ರಿಯೆಗೆ ನಾಂದಿ ಹಾಕುತ್ತಾರೆ.

Friday, October 16, 2009

Empathy!

ನಾನು ಒಮ್ಮೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ನಡೆದ ಘಟನೆ- ಒಂದು ನಾಯಿ ಮರಿ, ರಸ್ತೆಯನ್ನ ದಾಟುವುದಕ್ಕೆ ಪ್ರಯತ್ನಿಸ್ತಾ ಇತ್ತು, ಆದರೆ ಅದಕ್ಕೆ ಕಾಲು ಊನ, ಹಾಗಾಗಿ ಬಹಳವೇ ಕಷ್ಟಪಟ್ಟು ನಡೆಯಲು ಪ್ರಯತ್ನಿಸುತ್ತಾ ಇತ್ತು, ನಿಂತ ನನ್ನಂತ ಅನೇಕರಿಗೆ ತಳಮಳ-'ಇನ್ನೇನು ಸಿಗ್ನಲ್ ಟೈಮ್ ಆಗುತ್ತೆ, ನಾಯಿ ಇನ್ನು ಅರ್ಧ ದಾರಿ ಕ್ರಮಿಸಿದೆಯಷ್ಟೇ ' ಅಂತ...ಎಲ್ಲಿಂದಲೋ ಒಬ್ಬ ಪುಣ್ಯಾತ್ಮ, ಬಂದು ಆ ಮರಿಯನ್ನ ಎತ್ತಿಕೊಂಡು ಹೊರಟರು, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊರಟೆ, ಹಾಗೆ ಹೋಗುತ್ತಾ ರಸ್ತೆಯ ಬದಿಗೆ ಹೊರಳಿ ನೋಡಿದೆ-ನಾಯಿಯನ್ನ ಕೆಳಗಿಳಿಸಿದರು ಅವರು, ತಾವು ನಡೆದುಕೊಂಡು ಹೊರಟರು, ಆಗ ಗಮನಿಸಿದೆ- ಆ ವ್ಯಕ್ತಿಗೂ ಕಾಲು ಊನ ಅಂತ! ನನ್ನ ಮನಸಿನಲ್ಲಿ ಈ ಘಟನೆ ಉಳಿದು ಹೋಗಿದೆ-ಕೆಲವರೇ ಮಹಾತ್ಮರು ಯಾಕೆ ಆಗುತ್ತಾರೆ ಅಂತಲೂ ನನಗೆ ತಿಳಿವು ನೀಡಿದ ಘಟನೆ ಇದು.